ಮಾನಾಪಮಾನಗಳನ್ನು ಸಮನಾಗಿ ಕಾಣುವವನೇ ಮಹಾತ್ಮ ಎಂಬುದು ಲೋಕಪ್ರಸಿದ್ಧ.ಈ ಪ್ರಪಂಚದಲ್ಲಿ ಎಲ್ಲಾರೀತಿಯ ಒಳ್ಳೆಯ ಕೆಲಸವನ್ನು ತಮ್ಮ ದೃಷ್ಟಿಕೋನದಿಂದ ನೋಡಿ ನಿಂದಿಸುವುದು ಕೆಲವರ ವೃತ್ತಿ.ನಿಂದಿಸಿದರೂ ಹಿಡಿದ ಉತ್ತಮ ಕೆಲಸ ಮಾಡಿ ಮುಗಿಸುವುದು ಉತ್ತಮರ ಪ್ರವೃತ್ತಿ.ಇರಲಿ ಇದರ ನೀತಿಯನ್ನು ಅರಿಯಲು ಪುರಾಣಕಾಲಕ್ಕೆ ಹೋಗೋಣ.ಒಮ್ಮೆ ಒಂದು ರಾಜನ ಆಳ್ವಿಕೆ ಬಹಳ ದುರ್ಬಲವಾಗಿತ್ತು.ಆದ್ದರಿಂದ ಆತನ ರಾಜ್ಯದಲ್ಲಿ ಭ್ರಷ್ಟಾಚಾರ,ಕಳ್ಳತನ,ವಂಚನೆ ಇತ್ಯಾದಿಗಳು ಹೆಚ್ಚಾದವು.ಜನರಲ್ಲಿ ಧಾರ್ಮಿಕ ಶ್ರದ್ಧೆಯಾಗಲಿ,ಸತ್ಯವ್ಯವಹಾರವಾಗಲಿ ಇಲ್ಲವಾಯಿತು.ಇದರಿಂದ ಬೆಸರಗೊಂಡ ಆ ರಾಜ್ಯದ ಗುರುಕುಲದ ಆಚಾರ್ಯರೊಬ್ಬರು ಸಮಾಜದ ಸುದಾರಣೆಗೆ ಮುಂದಾಗುತ್ತಾರೆ.ಆ ರಾಜ್ಯದ ಎಲ್ಲೆಡೆ ತಿರುಗಿ ಸದ್ಬೋಧನೆಯನ್ನು ಮಾಡಿ ಸೇವಾಕಾರ್ಯದಲ್ಲಿ ತೋಡಗುವಂತೆಯೂ ಮಾಡುತ್ತಾರೆ,ತಮ್ಮನ್ನು ನಿರಂತರ ತೊಡಗಿಸಿಕೊಳ್ಳುತ್ತಾರೆ.ಹೀಗೆ ಅವರ ಅನುಯಾಯಿಗಳ ಸಂಖ್ಯೆಯು ಹೆಚ್ಚುತ್ತಾ ಹೋಯಿತು.ಇದನ್ನು ಸಹಿಸಲಾಗದ ಅವರ ವಿರೋಧಿಗಳು ಅಪಪ್ರಚಾರವನ್ನು ಪ್ರಾರಂಭಿಸಿದರು.ಈ ಕಪಟಿಯಾದ ಗುರುಗಳು ಸೇವಾಕಾರ್ಯದ ನೆಪದಿಂದ ಬಹಳ ಹಣವನ್ನು ಸಂಪಾದನೆಮಾಡುತ್ತೀದ್ದಾರೆಂಬ ಸುದ್ದಿಯನ್ನು ಹರಡಿದನು.ಈ ವಾರ್ತೆ ಆಚಾರ್ಯರವರೆಗೂ ಬಂದು ತಲುಪಿತು.ತಥಾಪಿ ಆ ಆಚಾರ್ಯರು ಆ ವಿಷಯಕ್ಕೆ ಲಕ್ಷ್ಯವನ್ನು ನೀಡದೇ ತಮ್ಮ ಸೇವಾಕಾರ್ಯದಲ್ಲಿ ನಿರತರಾಗಿದ್ದರು.ಒಮ್ಮೆ ಅವರ ಶಿಷ್ಯ ಅವರನ್ನು ಪ್ರಶ್ನಿಸುತ್ತಾನೆ.ಆಚಾರ್ಯರೆ ನಿಮ್ಮನ್ನು ಬಹಳವಾಗಿ ನಿಂದಿಸಿದರೂ ನೀವು ಏಕೆ ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿಲ್ಲ.ಆಗ ಗುರುಗಳು ಆತನ ಮುಖವನ್ನು ಒಮ್ಮೆ ನೋಡಿ ಎಲೈ ಶಿಷ್ಯನೇ ನಾನು ನಿನಗೊಂದು ಕೆಲಸವನ್ನು ಕೋಡುತ್ತೇನೆ. ಅದನ್ನು ಮೊದಲು ಮಾಡು ಆಮೇಲೆ ನಾನು ಉತ್ತರಿಸುತ್ತೇನ.ಹೀಗೆ ಹೇಳಿದ ಗುರುಗಳು ಒಂದು ಮಣಿಯನ್ನು ಆತನ ಕೈಯಲ್ಲಿ ಇಟ್ಟು ಇದನ್ನು ಸಾಧಾರಣ ಅಂಗಡಿಯಲ್ಲಿ ಹಾಗೂ ಸುವರ್ಣದಂಗಡಿಯಲ್ಲಿ ವಿಚಾರಿಸಿ ಇದರ ಬೆಲೆಯನ್ನು ತಿಳಿದುಕೊಂಡು ಬಾ ಎಂದು ಹೇಳುತ್ತಾರೆ.ಶಿಷ್ಯನು ಅಂಗಡಿಯಲ್ಲಿ ವಿಚಾರಿಸಿದಾಗ ಕೆಲವರು ಅದೊಂದು ಕಲ್ಲು ಎಂದು ಪರಿಗಣಿಸಿದರು.ಕೆಲವರು ಅದೊಂದು ಗಾಜಿನ ಮಣಿಯೆಂದು ಹತ್ತು ರೂಪಾಯಿಯ ಮೌಲ್ಯ ಕಟ್ಟಿದರು. ಕೆಲವರು ಐವತ್ತು ರೂಪಾಯಿಯ ಮೌಲ್ಯ ಕಟ್ಟಿದರು.ನಂತರ ಗುರುಗಳ ಆಜ್ಞೆಯಂತೆ ಸುವರ್ಣದಂಗಡಿಯತ್ತ ಹೋಗಿ ಅಲ್ಲಿ ವಿಚಾರಿಸಲಾಗಿ ಒಬ್ಬ ಸ್ವನಗಾರನು ಆ ಮಣಿಗೆ ಸಹಸ್ರ ರೂಪಾಯಿಯ ಮೌಲ್ಯವನ್ನು ಮಗದೊಬ್ಬನು ಇದು ಬಹಳ ಉತ್ತಮವಾದ ಮಣಿಯಾಗಿದ್ದು ಪರೀಕ್ಷಿಸಿಯೇ ಬೆಲೆ ಕಟ್ಟಬೇಕೆಂದು ಹೇಳುತ್ತಾನೆ.ನಂತರ ಶಿಷ್ಯನು ಗುರುಗಳ ಸಮೀಪಬಂದು ನಡೆದ ಸಂಗತಿಯನ್ನು ವಿವರಿಸುತ್ತಾನೆ.ಆಗ ಗುರುಗಳು ಮಗು ನೋಡು ಈ ಜನರ ವ್ಯವಹಾರ ಯಾವರೀತಿಯದೆಂದು ನೀನು ತಿಳಿದುಕೊ.ಯಾರು ನಮ್ಮ ಕಾರ್ಯೋದ್ದೇಶವನ್ನು ಅರಿಯಲಾರರೋ ಅವರು ಏನಾದರೂ ಹೇಳಿಯಾರು.ಅದರಿಂದ ನಮಗೇನೂ ಬಾಧೆಯಿಲ್ಲ.ಆದರೆ ಲೋಕದಲ್ಲಿ ಸತ್ಕಾರ್ಯದ ಮೌಲ್ಯವನ್ನು ಅರಿತವರು ಬಹಳಮಂದಿ ಇದ್ದಾರೆ.ಅವರು ನಮ್ಮ ಕಾರ್ಯದ ಯೋಗ್ಯತೆಯನ್ನು ಆರಿತಿದ್ದಾರೆ.ಆದ್ದರಿಂದ ಬುದ್ಧಿಹೀನರ ಮಾತಿಗೆ ಬೆಲೆ ಕೊಟ್ಟು ಸತ್ಕಾರ್ಯದಿಂದ ಹಿಂದೆಸರಿದರೆ ಅದು ಉಚಿತವಲ್ಲ.ಆದ್ದರಿಂದ ನನ್ನ ಕಾರ್ಯೋದ್ದೇಶವನ್ನು ನಿಷ್ಕಾಮನೆಯಿಂದ ನಿಷ್ಠೆಯಿಂದ ಮಾಡುತ್ತೇನೆ.ಹೀಗೆ ಹೇಳಿ ಮಂದಹಾಸ ಬೀರುತ್ತಾರೆ.ಇಂತಹ ಗುಣವೇ ವ್ಯಕ್ತಿಯನ್ನು ದೇವನನ್ನಾಗಿಸುತ್ತದೆ.